ಓಮಾನ್: ಮಧ್ಯ ಪ್ರಾಚ್ಯದ ಸೌದಿ ಅರೇಬಿಯ ಪರ್ಯಾಯ ದ್ವೀಪಕ್ಕೆ ಪುರ್ವ ಮತ್ತು ಆಗ್ನೇಯ ಭಾಗದಲ್ಲಿನ ಪ್ರದೇಶ (ಸುಲ್ತಾನೇಟ್ ಆಫ್ ಓಮಾನ್). ಪಶ್ಚಿಮ ಮತ್ತು ವಾಯವ್ಯದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್‌, ಈಶಾನ್ಯದಲ್ಲಿ ಓಮಾನ್ಕೊಲ್ಲಿಯನ್ನು ಒಳಗೊಂಡಿದೆ. ಒಂದು ಕೇಂದ್ರಾಡಳಿತ ಪ್ರದೇಶವಾಗಿದೆ. 220-230 ಉ.ಅ. ಹಾಗೂ 580-590 ಪು.ರೇ. ಗಳ ನಡುವೆ ಹಬ್ಬಿದೆ. ಇದರ ಒಟ್ಟು ವಿಸ್ತೀರ್ಣ 3,00,000 ಚ.ಕಿಮೀ. 1600 ಕಿಮೀ ಉದ್ದದ ತೀರ ಪ್ರದೇಶವನ್ನು ಒಳಗೊಂಡಿದೆ.  ಓಮಾನ್ ಕೊಲ್ಲಿ ಇರಾನನ್ನು ಓಮಾನ್ನಿಂದ ಬೇರ್ಪಡಿಸುತ್ತದೆ. 
ಭೂ ಸ್ವರೂಪ: ಒಳ ಭಾಗವು ಬೆಟ್ಟ ಗುಡ್ಡಗಳಿಂದಾವೃತವಾಗಿದ್ದು 3770 ಮೀ. ಎತ್ತರವಾದ ಶಿಖರವನ್ನು ಒಳಗೊಂಡಿದೆ. (ಜಬಲ್ ಶ್ಯಾಮ್) ಇದು ಮರುಭೂಮಿಯಾಗಿದ್ದು, ತೀರ ಪ್ರದೇಶದಲ್ಲಿ ಮಾತ್ರ ಫಲವತ್ತಾಗಿದೆ.  ಅನೇಕ ದ್ವೀಪಗಳನ್ನು ಒಳಗೊಂಡಿದ್ದು ಆಫ್ ಶೋರ್ಸ್‌ ಕುರಿಯ, ಮೂರಿಯ, ಮಸ್ಸೀರ ದ್ವೀಪಗಳನ್ನು ಒಳಗೊಂಡಿದೆ. 

 ವಾಯುಗುಣ 
ಇದು ಉಷ್ಣವಲಯದ ಮರುಭೂಮಿ ವಾಯುಗುಣವನ್ನು ಹೊಂದಿದ್ದು ವಾರ್ಷಿಕ ಸರಾಸರಿ ಉಷ್ಣಾಂಶ 35ºಸೆ. ಗಳು.  ಆದರೆ ತೀರಪ್ರದೇಶಗಳಲ್ಲಿ ಮಾನ್ಸೂನ್ ವಾಯುಗುಣದ ಪ್ರಭಾವದಿಂದಾಗಿ 21ºಸೆ. ಉಷ್ಣಾಂಶ ಕಂಡುಬರುತ್ತದೆ.  ಒಳನಾಡಿನ ಎತ್ತರದ ಪ್ರದೇಶಗಳು ಹೆಚ್ಚು ಮಳೆಯನ್ನು ಮಾನ್ಸೂನ್ ಮಾರುತಗಳಿಂದ ಪಡೆಯುತ್ತವೆ. ಅಲ್ಲದೆ ನೈಋತ್ಯ ಮಾನ್ಸೂನ್ ಮಾರುತಗಳ ಕಾಲದಲ್ಲಿ ಮಳೆ ಹೆಚ್ಚು.  ಬೇಸಗೆಯಲ್ಲಿ ಹೆಚ್ಚು ಬಿಸಿಲು, ಮಳೆಗಾಲದಲ್ಲಿ ಹೆಚ್ಚು ಮಳೆ, ಚಳಿಗಾಲದಲ್ಲಿ ಚಳಿ ಕಂಡುಬರುತ್ತದೆ. 

 ಸ್ವಾಭಾವಿಕ ಸಸ್ಯವರ್ಗ 
ಓಮನ್ ಮರುಭೂಮಿ ಮತ್ತು ಮಾನ್ಸೂನ್ ವಾಯುಗುಣವನ್ನು ಹೊಂದಿರುವುದರಿಂದ ಇಲ್ಲಿ ತೀರ ಪ್ರದೇಶಗಳಲ್ಲಿ ಕುರುಚಲು ಸಸ್ಯವರ್ಗ ಕಂಡುಬರುತ್ತದೆ.  ಮುಳ್ಳು ಕಳ್ಳಿಯ ಜಾತಿಗೆ ಸೇರಿದ ಸಸ್ಯವರ್ಗ, ಖರ್ಜೂರ, ಅಂಜೂರ, ನೀಲಗಿರಿ, ಆಲೀವ್ಸ್‌ ಹೆಚ್ಚಾಗಿ ಕಂಡುಬರುತ್ತದೆ. 
ಪ್ರಾಣಿಗಳು: ಕಾಡು ಪ್ರಾಣಿಗಳು ಕಂಡುಬರುವುದಿಲ್ಲ.  ಮರುಭೂಮಿಗಳಲ್ಲಿ ಮರಳುಗಪ್ಪೆ, ಅಳಿಲು, ಹಾವುಗಳು, ಮೊಲ, ಕುದುರೆ ಮುಂತಾದವುಗಳು ಇವೆ.

 ಜನಸಂಖ್ಯೆ 
3.2 ಮಿ. ಜನಸಂಖ್ಯೆಯನ್ನು ಹೊಂದಿದೆ (2003). ತೀರ ಪ್ರದೇಶದ ನಗರ ಪಟ್ಟಣಗಳು ಅಭಿವೃದ್ಧಿಹೊಂದಿದ್ದು ಮಸ್ಕಟ್, ಆಲ್-ಬಾಬಿನ, ಮುಸನ್ದಮ್, ಆದಿ-ದಾಹೀರ, ಅದ್-ದಕ್ಕಲಿಯ, ಆಶ-ಶರ್ಕಿಯ, ಆಲ್ವೋಸ್ಟ್‌, ದೋಪಾóರ್ಹ್‌ ಹೆಚ್ಚು ಜನದಟ್ಟಣೆಯಾಗಿವೆ. ಜನಸಾಂದ್ರತೆ ಪ್ರತಿ ಚ.ಕಿಮೀ ಗೆ 6.5. ಮಸ್ಕಟ್ ದಟ್ಟ ಜನಸಂಖ್ಯೆ ಹೊಂದಿದ್ದು, ಪ್ರಮುಖನಗರ, ರಾಜಧಾನಿ, ಬಂದರಾಗಿದೆ. ಜನಸಂಖ್ಯೆ 3,50,000 (2004).
ಧರ್ಮ: ಶೇ. 87.41 ರಷ್ಟು ಜನರು ಇಸ್ಲಾಮಿಯರು. ಇವರಲ್ಲಿ ಇಬ್ದಿಯಾ ಮುಸ್ಲಿಂ ಶೇ. 75 ರಷ್ಟು ಸುನ್ನಿ ಮುಸ್ಲಿಂ ಇದ್ದಾರೆ.  ಹಿಂದುಗಳು ಶೇ. 5.7 ರಷ್ಟು, ಕ್ರಿಶ್ಚಿಯನ್ ಶೇ. 4.7, ಬೌದ್ಧರು 0.8, ಇತರರು ಶೇ. 1.2 ರಷ್ಟಿದ್ದಾರೆ.
 ಭಾಷೆ 
ಅರೆಬಿಕ್ ರಾಷ್ಟ್ರಭಾಷೆ, ಇಂಗ್ಲಿಷ್ ಮತ್ತು ಅರೆಬಿಕ್ ಆಡಳಿತ ಭಾಷೆಯೂ ಆಗಿವೆ.  ಕೆಲವು ಪ್ರದೇಶಗಳಲ್ಲಿ ಭಾರತೀಯ ಭಾಷೆಗಳು ಅಭಿವೃದ್ಧಿ ಹೊಂದಿವೆ. 
 ಆರ್ಥಿಕತೆ 
ವ್ಯವಸಾಯ, ಪ್ರಾಣಿ ಸಾಕಾಣಿಕೆ, ಮೀನುಗಾರಿಕೆ, ಗಣಿಗಾರಿಕೆ, ಕೈಗಾರಿಕೆ, ವಾಣಿಜ್ಯ ವ್ಯವಹಾರಗಳು ಕಂಡುಬರುತ್ತವೆ. 
ವ್ಯವಸಾಯ: ತೀರ ಪ್ರದೇಶಗಳಲ್ಲಿ ದ್ವಿದಳ ಧಾನ್ಯ, ತರಕಾರಿಗಳಾದ ಆಲೂಗಡ್ಡೆ, ಟೊಮೊಟೊ, ಈರುಳ್ಳಿ, ಕೋಸುಗಳನ್ನು ಬೆಳೆಯುವುದಲ್ಲದೆ ಹುಳಿಭರಿತ ಹಣ್ಣುಗಳಾದ ದ್ರಾಕ್ಷಿ, ಖರ್ಜೂರ, ಸೇಬು, ಮಾವು, ಬಾಳೆ, ತಂಬಾಕು, ಕಲ್ಲಂಗಡಿ, ಕರ್ಬೂಜ, ನಿಂಬೆಗಳನ್ನು ಬೆಳೆಯುತ್ತಾರೆ. 
ಪಶುಸಂಗೋಪನೆ: ಸಾಗಾಣಿಕೆಗೆ ಬೇಕಾದ ಒಂಟೆ, ಕುದುರೆ, ಕತ್ತೆ, ಹೇಸರಗತ್ತೆ ಪ್ರಮುಖ ಪ್ರಾಣಿಗಳು. ಅಲ್ಲದೆ ಕುರಿ, ಮೇಕೆ, ಕೋಳಿ, ದನಗಳನ್ನು ಸಾಕುತ್ತಾರೆ. 
 ಗಣಿಗಾರಿಕೆ 
ಶೇ. 30.4 ರಷ್ಟು ದೇಶದ ಆದಾಯವು ಗಣಿಗಾರಿಕೆಯನ್ನು ಅವಲಂಬಿಸಿದೆ. ದೇಶದ ಶೇ. 27 ಜನರು ಗಣಿಗಾರಿಕೆಯನ್ನು ಉದ್ಯೋಗಕ್ಕಾಗಿ ಅವಲಂಬಿಸಿದ್ದಾರೆ.  ಪೆಟ್ರೋಲಿಯಂ ನಿಕ್ಷೇಪವು ಬೃಹತ್ ಪ್ರಮಾಣದಲ್ಲಿದ್ದು ಪೆಟ್ರೋಲಿಯಂ ಮತ್ತು ಅದರ ಉತ್ಪನ್ನ, ಸ್ವಾಭಾವಿಕ ಅನಿಲಗಳನ್ನು ಉತ್ಪಾದಿಸುವುದಲ್ಲದೆ, ಕ್ರೋಮೈಟ್, ಚಿನ್ನ, ಉಪ್ಪು, ಮಾರ್ಬಲ್, ಜಿಪ್ಸಂ, ಸುಣ್ಣಕಲ್ಲುಗಳನ್ನು ಅತ್ಯಧಿಕ ಪ್ರಮಾಣದಲ್ಲಿ ಉತ್ಪಾದಿಸುತ್ತದೆ. 
ಮೀನುಗಾರಿಕೆ: ಸಮುದ್ರದ ಮೀನುಗಾರಿಕೆ ಪ್ರಮುಖವಾಗಿದ್ದು ಆರ್ಥಿಕವಾಗಿ 1,17,000 ಮೆಟ್ರಿಕ್ ಟನ್ ಗಿಂತಲೂ ಅಧಿಕ ಮೀನನ್ನು ಉತ್ಪಾದಿಸಲಾಗುತ್ತದೆ.  ಟ್ರಾಫರ್ಸ್‌, ಸ್ನಾಪರ್ಸ್‌, ಜಾಟ್ ಫಿಶ್, ಕ್ರಾಕರ್ಸ್‌, ಡ್ರಮ್ ಫಿಶ್, ಜಾಕ್ ಫಿಶ್, ಕ್ರಿವೆಲ್ಲಾ, ಕವರೀವ, ಶಾರ್ಕ್, ರೇಸ್, ಸ್ಕೆಬ್, ಕಟಲೆಸ್ ಮುಂತಾದ ಪ್ರಮುಖ ಮೀನುಗಳನ್ನು ಹಿಡಿಯುತ್ತಾರೆ. ಮೀನುಗಾರಿಕೆ ಪ್ರಮುಖ ಉದ್ಯೋಗವಾಗಿದೆ.

 ಕೈಗಾರಿಕೆ 
ಎಣ್ಣೆ ಶುದ್ಧೀಕರಣಕೇಂದ್ರ, ಗ್ಯಾಸೋಲಿನ್, ಪೆಟ್ರೋಲ್, ಸೀಮೆಎಣ್ಣೆ, ಗ್ಯಾಸ್, ಡೀಸಲ್, ವಿದ್ಯುತ್ ಶಕ್ತಿ ಮುಂತಾದವುಗಳ ಉತ್ಪಾದನೆಯು ಅಭಿವೃದ್ಧಿ ಹೊಂದಿವೆ.  ಅಲ್ಲದೆ ಕಟ್ಟಡ ನಿರ್ಮಾಣ ವಸ್ತುಗಳು, ಸಿಮೆಂಟ್, ತಾಮ್ರ ಶುದ್ಧೀಕರಣ, ಆಹಾರ ಸಂಸ್ಕರಣೆ, ಹಗುರ ಎಂಜಿನಿಯರಿಂಗ್ ಪದಾರ್ಥಗಳು, ಹಡಗು, ಸಿದ್ಧ ವಸ್ತುಗಳ ಕೈಗಾರಿಕೆಗಳು ಅಭಿವೃದ್ಧಿಯನ್ನು ಹೊಂದಿವೆ.
 ವ್ಯಾಪಾರ 
ಕಚ್ಚಾ ಪೆಟ್ರೋಲಿಯಂ, ಶುದ್ಧಪೆಟ್ರೋಲ್, ಡೀಸೆಲ್, ಪ್ರಾಣಿಗಳು, ಮೀನು, ತಾಮ್ರ, ಕಟ್ಟಡ ನಿರ್ಮಾಣ ವಸ್ತುಗಳನ್ನು ಹೊರದೇಶಗಳಿಗೆ ರಫ್ತು ಮಾಡುತ್ತಿದೆ. ಖನಿಜಗಳು, ಆಹಾರ ಪದಾರ್ಥಗಳು, ಪ್ಲಾಸ್ಟಿಕ್, ರಬ್ಬರ್, ಜವಳಿ, ಬೆಲೆಬಾಳುವ ಹರಳುಗಳು, ವಾಹನ, ವಾಹನಗಳ ಬಿಡಿಭಾಗಗಳು, ಪಾತ್ರೆಗಳು, ವಿಮಾನಗಳು, ಫೋಟೋಗ್ರಾಫಿಕ್ ಉಪಕರಣ, ಔಷಧಿ, ರಾಸಾಯನಿಕ, ಸಂಗೀತ ಉಪಕರಣ, ಜವಳಿ, ಗಡಿಯಾರ, ಅಪರೂಪದ ವಸ್ತುಗಳು, ಯಂತ್ರ, ಯಂತ್ರೋಪಕರಣ ಮುಂತಾದವುಗಳನ್ನು ಆಮದು ಮಾಡಿಕೊಳ್ಳುತ್ತದೆ. ಆಸ್ಟ್ರೇಲಿಯ, ಬೆಲ್ಜಿಯಂ, ಚೀನ, ಫ್ರಾನ್ಸ್‌, ಇಟಲಿ, ಜಪಾನ್, ಭಾರತ, ಮಲೇಷ್ಯ, ನೆದರ್ಲೆಂಡ್, ಸೌದಿ ಅರೇಬಿಯ, ಸಿಂಗಪುರ, ಸ್ವೀಡನ್, ಯುಎಈ, ಅಮೆರಿಕ ಸಂಯುಕ್ತ ಸಂಸ್ಥಾನ, ಬ್ರಿಟನ್ ಮುಂತಾದ ದೇಶಗಳೊಡನೆ ವ್ಯಾಪಾರ ನಡೆಸಲಾಗುತ್ತಿದೆ. 
 ಸಾರಿಗೆ ಸಂಪರ್ಕ 
 ಇದು ರಸ್ತೆ , ರೈಲು, ಹಡಗು, ವಿಮಾನ ಸಾರಿಗೆ ವ್ಯವಸ್ಥೆಯನ್ನು ಒಳಗೊಂಡಿದೆ. ರೇಡಿಯೋ, ಪತ್ರಿಕೆ, ಟೆಲಿಫೋನ್, ಟೆಲಿವಿಷನ್, ಕಂಪ್ಯುಟರ್ ಮುಂತಾದ ಮಾಧ್ಯಮಗಳನ್ನು ಒಳಗೊಂಡಿದೆ. ಶೇ. 71.7 ಜನರು ವಿದ್ಯಾವಂತರಾಗಿದ್ದಾರೆ. 
 ಸರ್ಕಾರ 
 ದೇಶದಲ್ಲಿ ಸುಲ್ತಾನ್  ರಾಷ್ಟ್ರಾಧ್ಯಕ್ಷನಾಗಿದ್ದು ಪ್ರಧಾನಮಂತ್ರಿ, ಹಾಗೂ ಇತರ ಮಂತ್ರಿ ಮಂಡಲವನ್ನು ಒಳಗೊಂಡಿದೆ.                        (ಎಸ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ